ಪೆಟ್ಟಿಗೆಆಮೆ 
ಕೀಲೋನಿಯ ಗಣದ, ಟೆಸ್ಟುಡಿಸಿಡೀ ಕುಟುಂಬಕ್ಕೆ ಸೇರಿದ ನೆಲವಾಸಿ ಆಮೆ (ಬಾಕ್ಸ್ ಟಾರ್ಟಾಯಿಸ್).  ಇದರ ಚಿಪ್ಪು ಮುಚ್ಚಿದ ಪೆಟ್ಟಿಗೆಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು.  ಈ ಆಮೆ ಮುಖ್ಯವಾಗಿ ಉತ್ತರ ಅಮೆರಿಕದ ನಿವಾಸಿ.  ಸಂಯುಕ್ತ ಸಂಸ್ಥಾನದ ಪೂರ್ವ ಭಾಗಗಳಲ್ಲಿ ಸಿಸ್ಟುಡೊ ಕ್ಯಾರಲೈನ ಪ್ರಭೇದವೂ ಪಶ್ಚಿಮದಲ್ಲಿ ಸಿಸ್ಟುಡೊ ಅರ್ನೆಟ ಎಂಬ ಪ್ರಭೇದವೂ ಕಾಣಬರುತ್ತದೆ.  ಪೆಟ್ಟಿಗೆ ಆಮೆಗಳು ನೆಲವಾಸಿಗಳಾದ್ದರಿಂದ ಬೆರಳುಗಳು ಪ್ರತ್ಯೇಕವಾಗಿವೆ; ಜಾಲಪಾದಗಳಿಲ್ಲ.  ಪೂರ್ವಭಾಗದಲ್ಲಿಯ ಪ್ರಭೇದದ ಹಿಂಗಾಲಿನಲ್ಲಿ 4 ನಖಗಳೂ, ಪಶ್ಚಿಮ ಭಾಗದ ಪ್ರಭೇದದ ಹಿಂಗಾಲಿನಲ್ಲಿ 2 ಅಥವಾ 4 ನಖಗಳೂ ಇವೆ.  ಕ್ಯಾರಪೇಸ್ 10-15 ಸೆಂ. ಮೀ. ಉದ್ದವಿದೆ.  ತಲೆಬುರುಡೆಯಲ್ಲಿ ಟೆಂಪೊರಲ್ ಕುಳಿಯಾಗಲೀ ಮೂಳೆಗಳ ಕಮಾನಾಗಲೀ ಕ್ವಾಡ್ರೇಟ್ ಮತ್ತು ಕ್ವಾಡ್ರೆಟೊಜೂಗಲ್ ಮೂಳೆಗಳಾಗಲೀ ಇಲ್ಲ.  ದವಡೆಗಳಲ್ಲಿ ಹಲ್ಲುಗಳೂ ಇಲ್ಲ.  ದವಡೆಯ ಅಂಚು ಚೂಪಾಗಿದೆ.  ಪೆಟ್ಟಿಗೆ ಆಮೆ ಮಿಶ್ರಾಹಾರಿ.  ಬೆಳೆಗಳಿಗೆ ಹಾನಿಕರವಾದ ಕೀಟಗಳನ್ನು ಭಕ್ಷಿಸಿ ಮಾನವನಿಗೆ ಸಹಾಯಕವಾಗಿದೆ.  ಇದು 50 ರಿಂದ 100 ವರ್ಷಗಳಷ್ಟು ದೀರ್ಘಕಾಲ ಜೀವಿಸುತ್ತದೆ ಎನ್ನಲಾಗಿದೆ.  ತೀಕ್ಷ್ಣಚಳಿಯಲ್ಲಿ ಶಿಶಿರನಿದ್ರೆಹೋಗುತ್ತವೆ.

ಸಂತಾನೋತ್ಪತ್ತಿ ವಸಂತ ಋತುವಿನಲ್ಲಿ ನಡೆಯುತ್ತದೆ.  ಹೆಣ್ಣಾಮೆ ನೆಲದಲ್ಲಿ ಗುಳಿಯನ್ನು ತೋಡಿ 3-6 ಮೊಟ್ಟೆಗಳನ್ನಿಟ್ಟು, ಮಣ್ಣಿನಿಂದ ಮುಚ್ಚುತ್ತದೆ.  ಸೂರ್ಯನ ಶಾಖದಿಂದ ಮೊಟ್ಟೆಗಳೊಡೆದು ಮರಿಗಳು ಹೊರಬರುತ್ತವೆ.											(ಎಂ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ